Ibrahim Sutar RIP

0
502
Ibrahim Sutar RIP

ಸೂಫಿ ಸಂತ, ತತ್ವಪದ ಗಾಯಕ ಇಬ್ರಾಹಿಂ ಸುತಾರ ವಿಧಿವಶ

ಬಾಗಲಕೋಟೆ, ಫೆಬ್ರವರಿ 5: ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ ಗಾಯಕ ಇಬ್ರಾಹಿಂ ಸುತಾರ ವಿಧಿವಶರಾಗಿದ್ದಾರೆ. ತಮ್ಮ ಪ್ರವಚನ ಮತ್ತು ಸಂವಾದಗಳ ಮೂಲಕ ಹಿಂದೂ-ಮುಸ್ಲೀಮರ ಮಧ್ಯೆ ಭಾವೈಕ್ಯತೆಯನ್ನು ಹರಡಿದ ಮಹಾಲಿಂಗಪುರದ ಇಬ್ರಾಹಿಂ ಸುತಾರ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶನಿವಾರ ನಿಧನ ಹೊಂದಿದ ಕಬೀರ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ಇವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಇವರ ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದು, ಬಡ ಕುಟುಂಬದಲ್ಲಿ ಜನಿಸಿದ ಇಬ್ರಾಹಿಂ ಸುತಾರ ಅವರಿಗೆ ಓದಲು ಸಾಧ್ಯವಾಗಲಿಲ್ಲ.

ಬಾಲ್ಯದಲ್ಲಿ ಕುರಾನ್ ಅಧ್ಯಯನ: ಚಿಕ್ಕಂದಿನಲ್ಲೇ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಇಬ್ರಾಹಿಂ ಸುತಾರ, ಧರ್ಮಗುರುಗಳ ಮಾರ್ಗದರ್ಶನದಲ್ಲಿ ಕುರಾನ್ ಅಧ್ಯಯನ ಮಾಡಿಕೊಂಡರು. ಈ ವೇಳೆ ಬೇರೆ ಧರ್ಮಗ್ರಂಥಗಳಲ್ಲಿ ಸಾರವನ್ನು ತಿಳಿದುಕೊಳ್ಳುವ ಆಸೆ ಚಿಗುರಿತು. ಊರಿನಲ್ಲಿದ್ದ ಸಾಧುವಿನ ಭಜನಾ ಸಂಘ ಬೆಂಬಲ ನೀಡಿತು. ಧಾರ್ಮಿಕರ ಜೊತೆಯಲ್ಲಿ ತತ್ವಪದ ಮತ್ತು ವಚನಗಳನ್ನು ಕಲಿತುಕೊಂಡರು. ಉಪನಿಷತ್ತಿನ ಸಾರವನ್ನು ಅರಿತುಕೊಂಡರು.ಮೂರನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ ಇಬ್ರಾಹಿಂ ಸುತಾರರು, ಮಹಾಲಿಂಗಪುರದ ಬಹುಸಂಖ್ಯಾತರು ಮಾಡುತ್ತಿದ್ದ ನೇಕಾರಿಕೆಯನ್ನೇ ಕಲಿತುಕೊಂಡರು. ತದನಂತರದಲ್ಲಿ ನೇಕಾರಿಕೆಯನ್ನೇ ತಮ್ಮ ಉದ್ಯೋಗವಾಗಿ ಆರಿಸಿಕೊಂಡಿದ್ದರು.

ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮೀಜಿ ಪುಣ್ಯಾರಾಧನೆ ಸಂದರ್ಭದಲ್ಲಿ ಪ್ರತಿವರ್ಷದಲ್ಲಿ ಒಂದು ತಿಂಗಳು ನಡೆಯುವ ಪ್ರವಚನವನ್ನು ಕೇಳುತ್ತಿದ್ದು, ಅಲ್ಲಿನ ಧಾರ್ಮಿಕ ಚಿಂತನೆಗಳು ತಮ್ಮಲ್ಲಿನ ತಿಳುವಳಿಕೆ ಹೆಚ್ಚಿಸಿದವು ಎಂದು ತಮ್ಮ ಪ್ರವಚನಗಳಲ್ಲಿ ಸ್ವತಃ ಇಬ್ರಾಹಿಂ ಸುತಾರ ಸ್ಮರಿಸಿಕೊಳ್ಳುತ್ತಿದ್ದರು.

ಇಬ್ರಾಹಿಂ ಸುತಾರ ನಿಧನಕ್ಕೆ ಗಣ್ಯರ ಸಂತಾಪ: “ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.