Rashtriya Krishi Vikasa Yojane

0
128
Farmer

XVI 2022-23 ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮ

ಪೀಠಿಕೆ

ರೈತ ಮಿತ್ರ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ, ಹೋಬಳಿಗೆ ಒಂದರಂತೆ ರೈತ ಸಂಪರ್ಕ ಕೇಂದ್ರಗಳನ್ನು ಕೃಷಿ ಇಲಾಖೆಯ ಪ್ರಾಥಮಿಕ ಕಾರ್ಯನಿರ್ವಹಣಾ ಘಟಕವಾಗಿ ಕಾರ್ಯನಿರ್ವಹಿಸಲು ಹಾಗೂ ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯ ಮಾರ್ಗಗಳನ್ನು ರೂಪಿಸಲು ಸ್ಥಾಪಿಸಲಾಗಿದೆ.

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಲು ಸದರಿ ಇಲಾಖೆಗಳ ತಾಂತ್ರಿಕ ಅಧಿಕಾರಿಗಳನ್ನು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಲು ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗಳ ಸಮನ್ವಯ ಸಾಧಿಸಲು ಸರ್ಕಾರದ ಆದೇಶ ಸಂಖ್ಯೆ ಕೃಇ 108. ಕೃಯೋಕಾ 2013, ದಿನಾಂಕ 17.07.2014 ರ ಆದೇಶದಲ್ಲಿ ಸೂಚಿಸಲಾಗಿರುತ್ತದೆ.

ರಾಜ್ಯದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಬಂಧ ಕ್ಷೇತ್ರಮಟ್ಟದಲ್ಲಿ ಸಮಗ್ರ ಬದಲಾವಣೆಗಳನ್ನು ತರುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳನ್ನು, ರೈತರಿಗೆ ಮಾಹಿತಿ ತಂತ್ರಜ್ಞಾನ ವಿನಿಮಯಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ನೋಡಲ್  ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸಲು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ಷೇತ್ರಮಟ್ಟದಲ್ಲಿ ಕ್ರಮವಹಿಸಲು ಸರ್ಕಾರದ ಆದೇಶ ಸಂಖ್ಯೆ AGRI. Act /112 /2019, ಬೆಂಗಳೂರು, ದಿನಾಂಕ: 31.10.2019 ರಂದು ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಕಛೇರಿಯಿಂದ ಜಿಲ್ಲೆಗಳಿಗೆ ಸುತ್ತೋಲೆ (3.12.2019 ಮತ್ತು 04.02.2020)  ನೀಡಿ ಪ್ರತಿ ತಿಂಗಳ 1 ಮತ್ತು 3 ನೇ ವಾರದ ಸೋಮವಾರದಂದು ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ಸಭೆ ನಡೆಸಲು ಸೂಚಿಸಲಾಗಿರುತ್ತದೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳನ್ನು ನೋಡಲ್ ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸುವ ಬಗ್ಗೆ ಈಗಾಗಲೇ ಸುತ್ತೋಲೆ 1 (ಸಂ.ಕೃಇ 108 ಉ.ಕೃ.ನಿ(ಭೂಚೇ) ರೈಆದ್ವಿ/ಸು 2019-20 ದಿನಾಂಕ: 03.12.2019 ಮತ್ತು ಸುತ್ತೋಲೆ 2 (ಸಂ.ಕೃಇ 108 ಉ.ಕೃ.ನಿ(ಭೂಚೇ) ರೈಆದ್ವಿ/ಸು 2019-20 ದಿನಾಂಕ: 04.02.2020) ರಲ್ಲಿ ತಿಳಿಸಲಾಗಿರುತ್ತದೆ. ಮುಂದುವರೆದು 2021-22 ನೇ ಸಾಲಿಗೆ ಮಾರ್ಗಸೂಚಿ ಮತ್ತು ವಾರ್ಷಿಕ ಕಾರ್ಯಕ್ರಮವನ್ನು ಸಹ ಜಿಲ್ಲೆಗಳಿಗೆ ನೀಡಿ ಅದರಂತೆ ಅನುಷ್ಟಾನಗೊಳಿಸಲು ಸೂಚಿಸಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ,

 ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆಗಾಗಿ ಸಭೆ ಆಯೋಜನೆ

2022-23 ನೇ ಸಾಲಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮದ ಸಭೆಗಳನ್ನು ನಡೆಸಲು ಹಾಗೂ ಸದರಿ ಸಭೆಗಳಲ್ಲಿ ಏರ್ಪಡಿಸುವ  ಪದ್ಧತಿ ಪ್ರಾತ್ಯಕ್ಷತೆ, ತರಬೇತಿ ಸಾಮಾಗ್ರಿ, ದೃಶ್ಯಸಾಧನ ಹಾಗೂ ಮಾದರಿ ಗ್ರಾಮದಲ್ಲಿ ವಿವಿಧ ಇಲಾಖೆಗಳ ನೂತನ ಕಾರ್ಯಕ್ರಮಗಳನ್ನು ಚಾಲ್ತಿ ಯೋಜನೆಗಳಡಿ ಅನುಷ್ಟಾನ ಮಾಡಿ ಸಂಯೋಜನೆ ಮಾಡಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಈ ಕೆಳಕಂಡಂತೆ ವೆಚ್ಚ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸೂಚಿಸಿದೆ.

ಮೇಲಿನ ಸರ್ಕಾರದ ಆದೇಶದನ್ವಯ ಅನುದಾನ ಲಭ್ಯತೆ ಆದರಿಸಿ 2022-23 ನೇ ಸಾಲಿನ ಮಾರ್ಗಸೂಚಿಗಳನ್ನು ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

  1. ಕೃಷಿ ಮತ್ತು ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ (ಜಿಲ್ಲೆಯಲ್ಲಿ ಕಛೇರಿ ಇದ್ದರೆ)ಪಶು ಸಂಗೋಪನೆ,
    ಅರಣ್ಯ, ಸಹಕಾರ ಇತ್ಯಾದಿ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತೀ ತಿಂಗಳ ಮೊದಲನೇ ಸೋಮವಾರ ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ಸಭೆ ನಡೆಸಿ, ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಿ ರೈತರಿಗೆ ಮಾಹಿತಿ ನೀಡಲು ಕ್ರಮವಹಿಸತಕ್ಕದ್ದು ಹಾಗೂ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಲೀಡ್ ಬ್ಯಾಂಕ್‍ನ ಶಾಖಾ ವ್ಯವಸ್ಥಾಪಕರು ಸಹ ಈ ಸಭೆಗಳಲ್ಲಿ ಭಾಗವಹಿಸುವುದು.

ಅ. ವಿವಿಧ ಯೋಜನೆಗಳು ಮತ್ತು ಅವುಗಳನ್ನು ಒಗ್ಗೂಡಿಸುವ ಬಗ್ಗೆ

ಆ. ನೂತನ ತಾಂತ್ರಿಕತೆಗಳ ಅಳವಡಿಕೆ ಬಗ್ಗೆ

ಇ. ಮುಂದಿನ 30 ದಿನಗಳ ಹವಾಮಾನ ಮುನ್ಸೂಚನೆ ಹಾಗೂ ಹವಾಮಾನ ವಿಕೋಪಗಳನ್ನು ಎದುರಿಸಲು
ಕೈಗೊಳ್ಳುವ ಕ್ರಮಗಳ ಬಗ್ಗೆ

ಈ. ಮಾರುಕಟ್ಟೆ ಸೌಲಭ್ಯಗಳ ಬಗ್ಗೆ

ಉ. ಪ್ರಸ್ತುತ ಕೃಷಿ/ ತೋಟಗಾರಿಕೆ/ ರೇಷ್ಮೆ ಉತ್ಪನ್ನಗಳು ಹಾಗೂ ಕೃಷಿ ರಹಿತ ಉತ್ಪನ್ನಗಳ ಮಾರಾಟ ದರ ಕುರಿತು

ಊ. ಕೀಟ / ರೋಗಬಾಧೆ ಬರುವ ಸಾಧ್ಯತೆ ಮತ್ತು ನಿರ್ವಹಣೆ ಬಗ್ಗೆ

  1. ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರು ಆ ಭಾಗದ ರೈತರಿಗೆ ಈ ಸಭೆಗಳ ದಿನಗಳ ಕುರಿತು ಮುಂಚಿತವಾಗಿ ಪತ್ರಿಕೆಗಳ ಮುಖಾಂತರ, ಸಾಮಾಜಿಕ ಜಾಲತಾಣಗಳ ಮುಖಾಂತರ ಹಾಗೂ ಸಭಾ ಸೂಚನೆಗಳ ಮುಖಾಂತರ
    ಮುಂಚಿತವಾಗಿ ತಿಳಿಸಲು ಕ್ರಮ ಕೈಗೊಳ್ಳತಕ್ಕದ್ದು.
  2. ಈ ಸಭೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯಗಳಿಂದ ನಿಯೋಜಿಸಲಾದ ವಿಜ್ಞಾನಿ/ಸಿಬ್ಬಂದಿಯವರು   ಪಾಲ್ಗೊಳ್ಳುವುದು.
  3. ಸದರಿ ಸಭೆಗಳಲ್ಲಿ ಪ್ರಮುಖವಾಗಿ ರೈತರಿಂದ ಮೇಲ್ಕಾಣಿಸಿದ ಅಂಶಗಳ ಕುರಿತು ಪ್ರಶ್ನೆಗಳನ್ನು ಸ್ವೀಕರಿಸಿ ಸಾಧ್ಯವಾದಲ್ಲಿ ಸಭೆಯಲ್ಲಿಯೇ ಅವುಗಳಿಗೆ ಚರ್ಚಿಸಿ ಉತ್ತರಗಳನ್ನು ಒದಗಿಸುವುದು. ಇಲ್ಲದಿದ್ದಲ್ಲಿ ಮುಂದಿನ ಸಭೆಯಲ್ಲಿ ಉತ್ತರಿಸಲು ಕ್ರಮಕೈಗೊಳ್ಳತಕ್ಕದ್ದು.
  4. ಇಂತಹ ಸಭೆಗಳಲ್ಲಿ ಕೃಷಿ ಮತ್ತು ಸಂಬಂಧಪಟ್ಟ ಇತರೆ ವಿಷಯಗಳ ಕುರಿತು ನೂತನ ಪ್ರಯೋಗಗಳು/ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸಿರುವ ಪ್ರಗತಿಪರ ರೈತರ ಬಗ್ಗೆ 3-4 ನಿಮಿಷಗಳ ಕಾಲ ಸಾಕ್ಷ್ಯ ಚಿತ್ರ/ ವೀಡಿಯೋಗಳನ್ನು ಸಿದ್ಧಪಡಿಸಿ ಸಭೆಗಳಲ್ಲಿ ಪ್ರದರ್ಶಿಸುವುದು ಹಾಗೂ ರೈತರ ಮೊಬೈಲ್ ಫೋನ್‍ಗಳಿಗೆ ಕಳುಹಿಸಲು ಕ್ರಮ ವಹಿಸುವುದು.
  5. ಸಭೆಗಳು ಕಾಲಕಾಲಕ್ಕೆ ಜರುಗುತ್ತಿರುವ ಬಗ್ಗೆ ಹಾಗೂ ಪ್ರಯೋಜನಕಾರಿಯಾಗುತ್ತಿರುವ ಬಗ್ಗೆ ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.
  6. ಸಭಾ ನಡವಳಿಗಳನ್ನು ತಾಲ್ಲೂಕಿನ ತಹಸಿಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅಗತ್ಯ ಮಾಹಿತಿಗಾಗಿ ಹಾಗೂ ಕ್ರಮಕ್ಕಾಗಿ ಸಲ್ಲಿಸುವುದು.
  7. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸದರಿ ಸಭೆಯ ಎಲ್ಲಾ ಮಾಹಿತಿಗಳನ್ನು ಮಾಹೆವಾರು ಕ್ರೋಢೀಕರಿಸಿ ಕೇಂದ್ರ ಕಛೇರಿಗೆ ಮುಂದಿನ ತಿಂಗಳ 15 ನೇ ತಾರೀಖಿನೊಳಗೆ ಕಳುಹಿಸಲು ಕ್ರಮವಹಿಸುವುದು.
  8. ಸಭೆಗೆ ಭಾಗವಹಿಸುವ ನೋಡಲ್ ಅಧಿಕಾರಿಗಳ ಪಟ್ಟಿಯನ್ನು ರೈತ ಸಂಪರ್ಕವಾರು ತಯಾರಿಸುವುದು ಮತ್ತು ಜಂಟಿ ಕೃಷಿ ನಿರ್ದೇಶಕರವರಿಗೆ ಸಲ್ಲಿಸುವುದು.

ಅನುಷ್ಟಾನ ಮಾರ್ಗಸೂಚಿಗಳು:

  1. ಸಭೆಯ ದಿನಾಂಕಗಳನ್ನು ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸತಕ್ಕದ್ದು.
  2. ಸಭೆಗೆ ಹೆಚ್ಚಿನ ರೈತರ ಸಕ್ರಿಯ ಭಾಗವಹಿಸುವಿಕೆಗೆ ಪ್ರತಿ ಗ್ರಾಮ ಪಂಚಾಯತಿಯಿಂದ ನಿಗದಿತ ಸಂಖ್ಯೆಯಲ್ಲಿ ರೈತರು ಕಡ್ಡಾಯವಾಗಿ ಹಾಜರಾಗುವಂತೆ ಕ್ರಮವಹಿಸುವುದು.
  3. ಪ್ರತಿ ಸಭೆಯ ನಡವಳಿ ಮತ್ತು ಹಾಜರಾತಿ ಪಟ್ಟಿಯ ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ನಿರ್ವಹಿಸುವುದು.
  4. ಅವಶ್ಯಕತೆಗನುಗುಣವಾಗಿ ಛಾಯಾಚಿತ್ರ ದಾಖಲಾತಿ ಹಾಗೂ ನೋಂದಣಿ ವಹಿ ನಿರ್ವಹಿಸುವುದು
  5. ಇಲಾಖೆಗಳಲ್ಲಿ ಹೋಬಳಿ ಮಟ್ಟದಲ್ಲಿ ತರಬೇತಿಗಳಿದ್ದಲ್ಲಿ ಈ ದಿನದಂದು ಏರ್ಪಡಿಸುವಂತೆ ಕ್ರಮ ವಹಿಸಬಹುದಾಗಿದೆ.
  6. ಪ್ರಚಾರ

ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರು ಆ ಭಾಗದ ರೈತರಿಗೆ ಈ ಸಭೆಗಳ ದಿನಗಳ ಕುರಿತು ಮುಂಚಿತವಾಗಿ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸಭಾ ಸೂಚನೆಗಳ ಮುಖಾಂತರ ತಿಳಿಸಲು ಕ್ರಮ ಕೈಗೊಳ್ಳತಕ್ಕದ್ದು.

  1. ಅಧಿಕಾರಿಗಳ ಪಾಲ್ಗೊಳುವಿಕೆ

ಕೃಷಿ ಮತ್ತು ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಾಮಾಜಿಕ ಅರಣ್ಯ, ಮೀನುಗಾರಿಕೆ, ಲೀಡ್ ಬ್ಯಾಂಕ್, ಉಗ್ರಾಣ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಂದ ನಿಯೋಜಿಸಲಾದ ವಿಜ್ಙಾನಿ/ ಸಿಬ್ಬಂದಿ ಪಾಲ್ಗೊಳುವುದು.

  1. ಮೂಲಭೂತ ಸೌಕರ್ಯ ಕಲ್ಪಿಸುವುದು.

ಸಭೆ ಏರ್ಪಡಿಸಲು ಸೂಕ್ತವಾದ ಮೂಲಭೂತ ಸೌಕರ್ಯ ಕಲ್ಪಿಸಿ ಸಭೆಯಲ್ಲಿ ಭಾಗವಹಿಸುವ ರೈತರಿಗೆ ಕಾಫಿ/ಟೀ/ಲಘು ಉಪಹಾರ/ಪ್ರಯಾಣ ವೆಚ್ಚವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಭ್ಯವಿರುವ ಅನುದಾನದಲ್ಲಿ ಭರಿಸುವುದು.

  1. ಉಸ್ತುವಾರಿ ಮತ್ತು ಮೌಲ್ಯಮಾಪನ

ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು 1 & 2, ಜಕೃನಿ ಕಛೇರಿಯ ಸ.ಕೃ.ನಿ (ವಿತ), ಸಕೃನಿ (ಮೌಲ್ಯ ಮಾಪನ), ಸಕೃನಿ (ರೈಮ) ಮತ್ತು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು ಕಡ್ಡಾಯವಾಗಿ ಸಭೆಗಳಿಗೆ ಹಾಜರಾಗಲು ತಿಳಿಸಿದೆ.

  1. ನಡೆವಳಿಗಳನ್ನು ನಿಗದಿತ ನಮೂನೆಗಳಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸುವುದು (ನಿಗದಿತ ನಮೂನೆ ಲಗತ್ತಿಸಿದೆ.)

ರಾಷ್ಟ್ರಿಯ ಕೃಷಿ ವಿಕಾಸ ಯೋಜನೆಯಡಿ (ಲೆ.ಶೀ.2401-00-800-1-57 ಉ.ಶೀ.059) ಅನುದಾನ ಒದಗಿಸಲಾಗಿದ್ದು, ಪ್ರತಿ ರೈತ ಸಂಪರ್ಕ ಕೇಂದ್ರದ ಪ್ರತಿ ಸಭೆಗೆ ರೂ. 1750/- ವೆಚ್ಚ ಭರಿಸಬಹುದಾಗಿದೆ. ಪ್ರಸ್ತುತ ವರ್ಷದಲ್ಲಿ ಮಾಹೆವಾರು ಒಂದು ಸಭೆಯಂತೆ, 12 ಸಭೆಗಳನ್ನು ರೈತಸಂಪರ್ಕ ಕೇಂದ್ರದಲ್ಲಿ ನಡೆಸಲು ಸೂಚಿಸಿದೆ. ಮುಂದುವರೆದು ಪ್ರತಿ ಹೋಬಳಿಗೆ ಒಂದರಂತೆ ಆಯ್ಕೆ ಮಾಡಲಾದ ಮಾದರಿ ಗ್ರಾಮದಲ್ಲಿ ತ್ರೈಮಾಸಿಕಕ್ಕೆ ಒಂದರಂತೆ  4 ಸಭೆಗಳನ್ನು ಏರ್ಪಡಿಸುವುದು.

ಒಟ್ಟಾರೆ, ಮಾಹೆವಾರು 12 ಸಭೆಗಳು ಹಾಗೂ ತ್ರೈಮಾಸಿಕ 4  ಸಭೆಗಳು ಸೇರಿ 16 ಸಭೆಗಳನ್ನು ಆಯೋಜಿಸಲು ಅನುದಾನ ನಿಗಧಿಪಡಿಸಿ ಸೂಚಿಸಿದೆ. ಜಿಲ್ಲಾವಾರು ವಾರ್ಷಿಕ ಭೌತಿಕ ಹಾಗೂ ಆರ್ಥಿಕ ಗುರಿಗಳನ್ನು ಅನುಬಂಧ 1 ರಲ್ಲಿ ನೀಡಲಾಗಿದೆ.

ರೈತ ಸಂಪರ್ಕ ಕೇಂದ್ರದಲ್ಲಿ ಸಭೆ ಏರ್ಪಡಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ  ಬೇಕಾದ  ಘಟಕ ವೆಚ್ಚ

(ಸಭೆಗಳಲ್ಲಿ ಬಾಗವಹಿಸಬೇಕಾದ  ರೈತ/ರೈತಮಹಿಳೆಯರ ಸಂಖ್ಯೆ: ಕನಿಷ್ಟ 20 ಮಾತ್ರ)

ಕ್ರಸಂ ವಿವರ ಅನುದಾನ (ರೂಗಳಲ್ಲಿ)
1 ಸಭೆ ಸ್ಥಳದ ಸಿದ್ದತೆ,  ಪದ್ಧತಿ ಪ್ರಾತ್ಯಕ್ಷತೆ, ತರಬೇತಿ ಸಾಮಾಗ್ರಿ, ದೃಶ್ಯಸಾಧನ 500/-
2. ಲಘು ಉಪಹಾರ/ ಪ್ರಯಾಣವೆಚ್ಚ (20 ಜನ X ರೂ. 35 ರಂತೆ) 700/-
3 ಮಾದರಿ ಗ್ರಾಮಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಯೋಜಿಸಲು ಇಂಧನ ವೆಚ್ಚ/ ದಾಖಲೀಕರಣ/ಪ್ರಚಾರ ವೆಚ್ಚ..ಇತರೆ 550/-
  ಒಟ್ಟು 1750/-

ವಿಶೇಷ ಸೂಚನೆ:

  1. ಸ್ಥಳೀಯ ಅವಶ್ಯಕತೆಯನ್ನಾಧರಿಸಿ ಅಂತರ ಘಟಕ ಬದಲಾವಣೆಗೆ ಅವಕಾಶವಿರುತ್ತದೆ.
  2. ಸಭೆಯ ನಡೆವಳಿ ಹಾಗೂ ತಾಂತ್ರಿಕ ಪ್ರಗತಿ ವರದಿಯನ್ನು ನಮೂನೆ 1 &2 ರನ್ವಯ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರಿಗೆ ಸಿದ್ದಪಡಿಸಿ ಸಲ್ಲಿಸುವುದು. ತದನಂತರ ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಜಿಲ್ಲೆಯ ಕ್ರೋಢೀಕೃತ ವರದಿಯನ್ನು Google Spread sheet ನಲ್ಲಿ ದಾಖಲಿಸುವುದು ಹಾಗೂ ಸಭೆಗಳ ನಡವಳಿಗಳ  Hard copy ಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವುದು
  3. ಸಭೆಗಳನ್ನು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ/ಗ್ರಾಮಗಳಲ್ಲಿ ಅಥವಾ ಪ್ರಗತಿ ಪರ ರೈತರ ಹೊಲಗಳಲ್ಲಿ ಆದ್ಯತೆ ಮೇರೆಗೆ ಏರ್ಪಡಿಸುವುದು. (ಪ್ರಮುಖವಾಗಿ ಆರ್ಥಿಕವಾಗಿ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡುವುದು) ಈ ಸಭೆಗಳನ್ನು ಪ್ರತಿ ಬಾರಿ ಬೇರೆ ಬೇರೆ ಗ್ರಾಮಗಳಲ್ಲಿ ಆಯೋಜಿಸುವುದು.

 

ಅನುಬಂಧ – 1

 2022-23 ನೇ ಸಾಲಿನ ರಾ.ಕೃ.ವಿ.ಯೋಜನೆಯಡಿಯಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮದ  ವಾರ್ಷಿಕ ಕಾರ್ಯಕ್ರಮ
ಕ್ರ.ಸಂ ಜಿಲ್ಲೆಗಳು ಹೋಬಳಿಗಳ ಸಂಖ್ಯೆ ವಾರ್ಷಿಕ ಸಭೆಗಳ ಸಂಖ್ಯೆ ಜಿಲ್ಲಾವಾರು         ಸಭೆಗಳ ಸಂಖ್ಯೆ ಆರ್ಥಿಕ   (ರೂ.1750/ ತರಬೇತಿ)
1 ಬಾಗಲಕೋಟೆ 18 16 288 5.040
2 ಬೆಂಗಳೂರು (ನ) 11 16 176 3.080
3 ಬೆಂಗಳೂರು (ಗ್ರಾ) 17 16 272 4.760
4 ಬೆಳಗಾವಿ 35 16 560 9.800
5 ಬಳ್ಳಾರಿ 13 16 208 3.640
6 ಬೀದರ್ 30 16 480 8.400
7 ಚಾ.ನಗರ 16 16 256 4.480
8 ಚಿಕ್ಕಬಳ್ಳಾಪುರ 26 16 416 7.280
9 ಚಿಕ್ಕಮಗಳೂರು 34 16 544 9.520
10 ಚಿತ್ರದುರ್ಗ 22 16 352 6.160
11 ದಕ್ಷಿಣ ಕನ್ನಡ 17 16 272 4.760
12 ದಾವಣಗೆರೆ 20 16 320 5.840
13 ಧಾರವಾಡ 14 16 224 3.920
14 ಗದಗ್ 11 16 176 3.080
15 ಕಲಬುರ್ಗಿ 32 16 512 8.960
16 ಹಾಸನ 38 16 608 10.640
17 ಹಾವೇರಿ 19 16 304 5.320
18 ಕೊಡಗು 16 16 256 4.480
19 ಕೋಲಾರ 27 16 432 7.560
20 ಕೊಪ್ಪಳ 20 16 320 5.600
21 ಮಂಡ್ಯ 31 16 496 8.680
22 ಮೈಸೂರು 33 16 528 9.240
23 ರಾಯಚೂರು 37 16 592 10.360
24 ರಾಮನಗರ 18 16 288 5.040
25 ಶಿವಮೊಗ್ಗ 39 16 624 10.920
26 ತುಮಕೂರು 50 16 800 14.000
27 ಉಡುಪಿ 9 16 144 2.520
28 ಉತ್ತರಕನ್ನಡ 35 16 560 9.800
29 ವಿಜಯಪುರ 20 16 320 5.600
30 ವಿಜಯನಗರ 18 16 288 5.040
31 ಯಾದಗಿರಿ 16 16 256 4.480
  ಒಟ್ಟು 742 16 11872 208.000

                        

 

    II . ಮಾದರಿ ಗ್ರಾಮಗಳಲ್ಲಿ ತಾಂತ್ರಿಕತೆಗಳ ಅಳವಡಿಕೆ ಕಾರ್ಯಕ್ರಮ

(ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಿಂದ ಚಾಲ್ತಿ ಯೋಜನೆಗಳ ಅನುಷ್ಠಾನ)_

          ರೈತರ  ಜೀವನೋಪಾಯ ಸುರಕ್ಷತೆಗಾಗಿ ಸಮಗ್ರ ಕೃಷಿ ಪದ್ದತಿ, ಕೃಷಿ-ರೈತ-ಭೂಮಿ-ಜಾನುವಾರುಗಳ ಪರಿಕಲ್ಪನೆ, ಆರ್ಥಿಕ ಸುಸ್ಥಿರ ಕೃಷಿಗಾಗಿ ಮಿಶ್ರ ಕೃಷಿ, ತೋಟಗಾರಿಕೆ ಮಾದರಿ ಬೆಳೆಗಳು, ಪಶುಸಂಗೋಪನೆ ಘಟಕಗಳನ್ನು ಸಂಯೋಜಿಸುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿರುತ್ತದೆ. ಈ ಹಿನ್ನಲೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಮಾದರಿ ಗ್ರಾಮ ಆಯ್ಕೆ ಮಾಡಿ ರೈತರ ಆದಾಯ ಹೆಚ್ಚಿಸುವ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು/ ನೂತನ ತಾಂತ್ರಿಕತೆಯನ್ನು ವಿವಿಧ ಇಲಾಖೆಗಳ ಮೂಲಕ ಅಳವಡಿಸಿ ಇತರೆ ಗ್ರಾಮದ ರೈತರಿಗೆ ಮಾದರಿಗಳಾಗಿ ಪ್ರದರ್ಶಿತವಾಗುವಂತೆ ಹಾಗೂ ಈ ಮೂಲಕ ರೈತರು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳುವಂತೆ ಮಾದರಿ ಗ್ರಾಮದಲ್ಲಿ ಅನುಷ್ಠಾನ ಕೈ ಗೊಳ್ಳುವುದು.

ಮಾದರಿ ಗ್ರಾಮದ ಆಯ್ಕೆ:

  1. ಪ್ರತಿ ಜಿಲ್ಲೆಯಲ್ಲಿ ಮಾದರಿಯಾಗಿ ಪ್ರತಿ ಹೋಬಳಿಗೆ ಒಂದರಂತೆ ಆಯ್ಕೆ ಮಾಡುವುದು.
  2. ರೈತ ಸಂಪರ್ಕ ಕೇಂದ್ರಗಳ ಕೇಂದ್ರ ಸ್ಥಾನದಿಂದ 5 ಕಿಮೀ ವ್ಯಾಪ್ತಿಯಲ್ಲಿ ಗ್ರಾಮವನ್ನು ಕೃಷಿ ಹಾಗೂ ಇತರೆ ಇಲಾಖೆಗಳ ಸಹಯೋಗದಿಂದ ಆಯ್ಕೆ ಮಾಡಲು ಸೂಚಿಸಿದೆ.
  3. ಆರ್ಥಿಕವಾಗಿ ಹಿಂದುಳಿದ ಗ್ರಾಮಕ್ಕೆ ಆದ್ಯತೆ ನೀಡುವುದು. ಮಾದರಿ ಗ್ರಾಮದ ವಿವರಗಳನ್ನು ಈ ಕೆಳಗಿನಂತೆ ನೀಡುವುದು
ಕ್ರ.ಸಂ ಜಿಲ್ಲೆ ತಾಲ್ಲೂಕು ಹೋಬಳಿ ಮಾದರಿ ಗ್ರಾಮದ ಹೆಸರು ಗ್ರಾಮದ ಭೌಗೋಳಿಕ ಪ್ರದೇಶದ ಸಂಕ್ಷಿಪ್ತ ವಿವರ
           

ಮಾದರಿ ಗ್ರಾಮದಲ್ಲಿ ಚಾಲ್ತಿ ಯೋಜನೆಗಳ ಅನುಷ್ಠಾನ:

ಕೃಷಿ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳ ಚಾಲ್ತಿ ಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ಸಂಯೋಜಿತ ಮಾದರಿ ಗ್ರಾಮದಲ್ಲಿ ಕಡ್ಡಾಯವಾಗಿ ಅನುಷ್ಠಾನ ಮಾಡಲು ಸೂಚಿಸಿದೆ. ಈ ಗ್ರಾಮಗಳಲ್ಲಿ ಈ ಕೆಳಗಿನ ಅಂಶಗಳ ಮೇಲೆ ಒತ್ತು ನೀಡುವುದು.

  • ಉತ್ಪಾದನಾ ವೆಚ್ಚದ ಮೇಲೆ ನಿಯಂತ್ರಣ ಕುರಿತು
  • ವಿವಿಧ ಇಲಾಖೆಗಳ ನವೀನ ತಂತ್ರಜ್ಞಾನಗಳ ಅಳವಡಿಕೆ
  • ಮಾರುಕಟ್ಟೆ ಆಧಾರಿತ ಬೆಳೆ ಯೋಜಿಸುವುದು
  • ಕೃಷಿ ಪರಿಕರಗಳ ದಕ್ಷತೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ
  • ಸಮರ್ಪಕವಾಗಿ ಅಂತರ್ಜಲ ಬಳಕೆ ಮಾಡುವ ಹಿನ್ನಲೆಯಲ್ಲಿ ಮುಖ್ಯವಾಗಿ ಅತಿ ಹೆಚ್ಚು ನೀರನ್ನು ಉಪಯೋಗಿಸುವಂತಹ ಭತ್ತದ ಬೆಳೆಯ ಕ್ಷೇತ್ರವನ್ನು ಮಿತಿಗೊಳಿಸುವುದು.
  • ಪರ್ಯಾಯ ಬೆಳೆ ಮಾದರಿಯನ್ನು ಅನುಸರಿಸಲು ಪ್ರೋತ್ಸಾಹಿಸುವುದು. (ದ್ವಿದಳಧಾನ್ಯ ಮತ್ತು ಎಣ್ಣೆಕಾಳು, ನಗರ ಪ್ರದೇಶದ ಹತ್ತಿರದ ಪ್ರದೇಶದಲ್ಲಿ ತರಕಾರಿ ಬೆಳೆಗಳು)
  • ಬೆಳೆ ವಿಧಾನಗಳನ್ನು (Cropping Pattern) ಉತ್ತಮಪಡಿಸುವುದು.

ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ರೇಷ್ಮೆ, ಮುಂತಾದವುಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ದತಿ ಪ್ರಾತ್ಯಕ್ಷತೆಗಳನ್ನು ಏರ್ಪಡಿಸುವುದು.

ಕ್ರಸಂ ಮಾದರಿ ಗ್ರಾಮದಲ್ಲಿ ಪ್ರಸ್ತಾಪಿಸಿರುವ  ಘಟಕಗಳು ಇಲಾಖೆ
1 ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಹೊಂಡ ಜಲಾನಯನ
2 ಹೊಸ ತಳಿಗಳ ಮತ್ತು ನವೀನ ತಾಂತ್ರಿಕತೆ ದ್ವಿದಳಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳ ಪ್ರಾತ್ಯಕ್ಷತೆ ಕೃಷಿ
3 ಎರೆಹುಳು ತೊಟ್ಟಿ/ ಬಯೋಡೈಜೆಸ್ಟರ್ /ಅಝೊಲಾ ಕೃಷಿ/ಮನರೇಗಾ
4 ಜೇನುಸಾಕಾಣಿಕೆ/ಹಣ್ಣಿನ ಬೆಳೆಗಳು ತೋಟಗಾರಿಕೆ/ಪಶುಸಂಗೋಪನೆ
5 ಕೋಳಿ / ಹಸು/ಕುರಿ/ಮೇಕೆ ಸಾಕಾಣಿಕೆ ಪಶುಸಂಗೋಪನೆ
6 ಮೇವು ಮತ್ತು ಕೈತೋಟ ತೋಟಗಾರಿಕೆ/ಪಶುಸಂಗೋಪನೆ
7 ಕೃಷಿ ಅರಣ್ಯ ಸಾಮಾಜಿಕ ಅರಣ್ಯ

ಅನುಷ್ಟಾನ ಮಾರ್ಗಸೂಚಿಗಳು:

  • ಗ್ರಾಮದಲ್ಲಿ ಅನುಷ್ಟಾನ ಪೂರ್ವದಲ್ಲಿ ರೈತರ ಆರ್ಥಿಕ, ಸಾಮಾಜಿಕ ಸ್ಥಿತಿಯನ್ನು ಸಮೀಕ್ಷೆ ನಡೆಸುವುದು ಹಾಗೂ ವರ್ಷಾಂತ್ಯದಲ್ಲಿ ಅನುಷ್ಟಾನ ನಂತರದ ಸಮೀಕ್ಷೆ ನಡೆಸುವುದು.
  • ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅಳವಡಿಸುವ ಕುರಿತು ಸಮೀಕ್ಷೆ ಆಧರಿಸಿ ಪಟ್ಟಿ ತಯಾರಿಸಿ ನೀಡುವುದು. ಸ್ಥಳೀಯ ಅವಶ್ಯಕತೆಗನುಗುಣವಾಗಿ ವಿವಿಧ ತಾಂತ್ರಿಕತೆಗಳೊಂದಿಗೆ ವಿವಿಧ ಮಾದರಿ ರೂಪಿಸಿ ನೀಡುವುದು.
  • ಆಯ್ಕೆಯಾದ ಗ್ರಾಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ರೈತರ ಜಮೀನುಗಳಲ್ಲಿ ಸಮಗ್ರ ಕೃಷಿ ಪದ್ಧತಿ ಮಾದರಿಗಳಂತೆ ಅನುಷ್ಟಾನಗೊಳಿಸುವುದು.
  • ರೈತ ಫಲಾನುಭವಿಗಳಲ್ಲಿ ಈಗಾಗಲೇ ಇರುವ ಘಟಕಗಳನ್ನು ಹೊರತು ಪಡಿಸಿ  ಇತರೆ ಚಟುವಟಿಕೆಗಳಿಗೆ ಆದ್ಯತೆ ನೀಡುವುದು.
  • ಫಲಾನುಭವಿ ರೈತನ ಕ್ಷೇತ್ರದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಅನುಷ್ಟಾನ ವೆಚ್ಚವನ್ನು ಆಯಾ ಇಲಾಖೆಗಳ ಚಾಲ್ತಿ ಯೋಜನೆಗಳಡಿ ಭರಿಸುವುದು.

ಫಲಾನುಭವಿಗಳ ಆಯ್ಕೆ:

  • ಫಲಾನುಭವಿಗಳು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು.
  • ಸಮೀಕ್ಷೆ ಆಧಾರಿಸಿ ನೇರವಾಗಿ ಫಲಾನುಭವಿ ಆಯ್ಕೆ ಮಾಡುವುದು.
  • ಫಲಾನುಭವಿ ರೈತರ ಪೂರ್ಣ ದತ್ತಾಂಶದ ಸಂಗ್ರಹಣೆ ಮಾಡುವುದು.
  • ಅನುಷ್ಠಾನ ಪೂರ್ಣಗೊಂಡ ನಂತರ ಯಶೋಗಾಥೆಗಳು ಮತ್ತು ಛಾಯಾಚಿತ್ರಗಳ (ಹಂತವಾರು) ದಾಖಲಾತಿ ಮಾಡುವುದು.

ಜವಾಬ್ದಾರಿಗಳು

ಜಂಟಿ ಕೃಷಿ ನಿರ್ದೇಶಕರು

  • ಜಿಲ್ಲಾ ಮಟ್ಟದಲ್ಲಿ, ಸಭೆ ಆಯೋಜನೆ ಕುರಿತು ಕೃಷಿ, ಸಂಬಂಧಿತ ಇಲಾಖೆಗಳ ಮತ್ತು ಕೃಷಿ ವಿಶ್ವ ವಿದ್ಯಾಲಯಗಳೊಂದಿಗೆ ಸಮನ್ವಯಗೊಳಿಸುವಲ್ಲಿ ಕ್ರಮ ವಹಿಸುವುದು.
  • ಮಾದರಿ ಗ್ರಾಮಗಳ ಆಯ್ಕೆಯ ಪಟ್ಟಿಯನ್ನು ಅನುಮೋದಿಸಿ ಕೇಂದ್ರ ಕಛೇರಿಗೆ ಸಲ್ಲಿಸುವುದು.
  • ಜಿಲ್ಲಾ ಮಟ್ಟದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ, ಆಯ್ಕೆಯಾದ ಮಾದರಿ ಗ್ರಾಮದಲ್ಲಿ ಪ್ರತಿ ಚಾಲ್ತಿ ಯೋಜನೆಗಳ ಅನುಸಾರ ಅನುಷ್ಠಾನ ಮಾಡಲು ಕ್ರಮ ವಹಿಸುವುದು.
  • ಪ್ರತಿ ಹೋಬಳಿಗೆ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಯ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಗ್ರಾಮವಾರು ಉಸ್ತುವಾರಿ ಮತ್ತು ದಾಖಲಾತಿಗಳನ್ನು ಪ್ರತಿ ಮಾಹೆಯ ಅಂತ್ಯದಲ್ಲಿ ನೀಡುವಂತೆ ಕ್ರಮ ಕೈಗೊಳುವುದು.
  • ಕೇಂದ್ರ ಕಛೇರಿಗೆ ಮಾಹೆವಾರು ವರದಿ ನೀಡುವುದು.
  • ಪ್ರಗತಿ ಪರಿಶೀಲನೆಗೆ ಅದ್ಯತೆಯಲ್ಲಿ ಪ್ರತಿ ಮಾಹೆ ಸಭೆ ಏರ್ಪಡಿಸುವುದು.
  • ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ 10 ಗ್ರಾಮಗಳಿಗೆ ಕಡ್ಡಾಯ ಭೇಟಿ ಮತ್ತು ಉಸ್ತುವಾರಿ

ಉಪ ಕೃಷಿ ನಿರ್ದೇಶಕರು:

  • ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತರಬೇತಿ ಹಾಗೂ ಮಾಹಿತಿ ನೀಡುವುದು.
  • ಉಸ್ತುವಾರಿ ಮತ್ತು ವಿಭಾಗ ಮಟ್ಟದ ಅನುಷ್ಠಾನದ ಪ್ರಗತಿ ಪರಿಶೀಲನೆ.
  • ವಿಭಾಗ ಮಟ್ಟದ ಎಲ್ಲಾ ಇಲಾಖೆಯ ಮುಖ್ಯಸ್ಥರು ಶೇ.10 ಗ್ರಾಮಗಳ ಉಸ್ತುವಾರಿ ಕಡ್ಡಾಯ.

ಸಹಾಯಕ ಕೃಷಿ ನಿರ್ದೇಶಕರು:

  • ತಾಲ್ಲೂಕಿನಲ್ಲಿ ಆಯ್ಕೆಯಾದ ಗ್ರಾಮದ ಪಟ್ಟಿಯನ್ನು ದೃಢೀಕರಿಸಿ ಅನುಮೋದನೆಯೊಂದಿಗೆ ಉಪ ಕೃಷಿ ನಿರ್ದೇಶಕರವರಿಗೆ ಸಲ್ಲಿಸುವುದು.
  • ಆಯ್ಕೆಯಾದ ಗ್ರಾಮಗಳಲ್ಲಿ ಕೃಷಿ ಪರಿಕರ ಲಭ್ಯತೆ ಹಾಗೂ ಕೃಷಿ & ಜಲಾನಯನ ಯೋಜನೆಗಳ ಅನುಷ್ಟಾನಕ್ಕೆ ಸೂಕ್ತ ಕ್ರಮಕೈಗೊಳ್ಳುವುದು.
  • ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದು ಎಲ್ಲಾ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನವಾಗುವಂತೆ ಕ್ರಮ ವಹಿಸುವುದು.
  • ತಾಲ್ಲೂಕು ಮಟ್ಟದ ಎಲ್ಲಾ ಮುಖ್ಯಸ್ಥರು ಶೇ.10 ಗ್ರಾಮಗಳ ಉಸ್ತುವಾರಿ ಕಡ್ಡಾಯ.

ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ:

  • ಕಾರ್ಯಕ್ರಮದ ಅರಿವು ಮೂಡಿಸುವುದು.
  • ಗ್ರಾಮಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ರೂಪುರೇಷೆ, ಘಟಕವಾರು ಅನುಷ್ಠಾನ, ಕೃಷಿ ಪರಿಕರ ಅವಶ್ಯಕತೆ ಮತ್ತು ಲಭ್ಯತೆ ಮತ್ತು ವೇಳಾಪಟ್ಟಿ ತಯಾರಿಸುವ ಪೂರ್ಣ ಜವಾಬ್ಧಾರಿ ಇರುತ್ತದೆ.
  • ಆರ್ಥಿಕ ಸೌಲಭ್ಯ ನೀಡುವ ಬಿಲ್ಲುಗಳನ್ನು ದೃಢೀಕರಿಸುವುದು.

ಆತ್ಮ ಯೋಜನೆಯ ತಾಂತ್ರಿಕ ಸಹಾಯಕರು (ATM)

  • ಆಯ್ಕೆಯಾದ ರೈತರ ತರಬೇತಿಯಲ್ಲಿ ಭಾಗವಹಿಸುವುದು.
  • ರೈತರ ತಾಕಿಗೆ ಅನುಗುಣವಾಗಿ ಮಾರ್ಗಸೂಚಿಯಂತೆ ರೂಪುರೇಷೆ, ಘಟಕವಾರು ಅನುಷ್ಠಾನ, ಕೃಷಿ ಪರಿಕರ ಅವಶ್ಯಕತೆ, ಲಭ್ಯತೆ ಮತ್ತು ವೇಳಾಪಟ್ಟಿ ತಯಾರಿಸಲು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಇವರಿಗೆ ಸಹಕರಿಸುವುದು.
  • ಆಯ್ಕೆಯಾದ ರೈತರ ತಾಕಿಗೆ ಭೇಟಿ ನೀಡಿ ಕ್ಷೇತ್ರ ಪರಿಶೀಲನೆ
  • ಪ್ರತಿ ತಾಕಿನ ಉಸ್ತುವಾರಿ, ಹಂತವಾರು ವರದಿಗಳನ್ನು ತಯಾರಿಸುವುದು.

ಮಾದರಿ ಗ್ರಾಮದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಅನುಷ್ಠಾನ ಕುರಿತು ಹಾಗೂ  ಫಲಾನುಭವಿವಾರು ಆರ್ಥಿಕ ಮಟ್ಟದ ಹೆಚ್ಚಳ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವುದು. ಅಳವಡಿಕೆ ಪೂರ್ವ ಹಾಗೂ ನಂತರದ ಸಮೀಕ್ಷೆಯೊಂದಿಗಿನ  ವಿಶ್ಲೇಷಣಾ ವರದಿ  ನೀಡುವುದು.

ಯೋಜನೆಯ ಅನುಷ್ಠಾನ ವೇಳಾಪಟ್ಟಿ

ಕ್ರಸಂ ದಿನಾಂಕ ವರದಿ ಮಾಡುವ ದಿನಾಂಕ
1 ಗ್ರಾಮಗಳ ಆಯ್ಕೆ ಮತ್ತು ವಿವಿಧ ಇಲಾಖೆಗಳ ಕ್ರಿಯಾ ಯೋಜನೆ ರೂಪಿಸುವುದು ಜುಲೈ 30 ರ ಒಳಗೆ
2 ಫಲಾನುಭವಿಗಳ ಆಯ್ಕೆ ಮತ್ತು ಸಾಮಾನ್ಯ ಮಾಹಿತಿ ಸಂಗ್ರಹಣೆ ಆಗಸ್ಟ್‌ 7 ರ ಒಳಗೆ
3 ಗ್ರಾಮಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಅನುಷ್ಠಾನ ಪೂರ್ವ ವಿವರ ಮತ್ತು ಪ್ರಸಕ್ತ ಸಾಲಿಗೆ ಅನುಷ್ಠಾನ ಮಾಡಬೇಕಾಗಿರುವ ಕಾರ್ಯಯೋಜನೆ ತಯಾರಿಕೆ ಆಗಸ್ಟ್‌ 20
4 ಗ್ರಾಮಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಅನುಷ್ಠಾನ ಪ್ರತಿ ಮಾಹೆಯ ಅಂತ್ಯದಲ್ಲಿ ಪ್ರಗತಿ ವರದಿ

ಕೃಷಿ & ಸಂಬಂಧಿತ ಇಲಾಖೆಗಳ ಚಾಲ್ತಿಯೋಜನೆಗಳ ಒಗ್ಗೂಡಿಸುವಿಕೆಯಿಂದ ಸಾಧನೆ:

  1. 742 ಗ್ರಾಮಗಳ ರೈತ ಕುಟುಂಬಗಳಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಪ್ರಯೋಜನ.
  2. ಪ್ರತಿ ರೈತ ಕುಟುಂಬದ ಆದಾಯದಲ್ಲಿ ಖಚಿತವಾದ ಹೆಚ್ಚಳ.
  3. ವಿವಿಧ ಇಲಾಖೆಗಳ ಕೇಂದ್ರೀಕೃತ ಅನುಷ್ಠಾನದಿಂದ ಒಂದೇ ಗ್ರಾಮದಲ್ಲಿ ಯೋಜನೆಯ ತಾಂತ್ರಿಕತೆಗಳ ಲಭ್ಯತೆ.
  4. ಗ್ರಾಮದಲ್ಲಿ ಇತರೆ ರೈತರಿಗೆ ಯಶಸ್ಸಿನ ಪ್ರದರ್ಶನದಿಂದ ಅರಿವು ಮೂಡಿಸುವಿಕೆ
  5. ನೂತನ ತಾಂತ್ರಿಕತೆಗಳನ್ನು ಇಲಾಖೆಗಳ ಒಗ್ಗೂಡಿಸುವಿಕೆಯಿಂದ ಹೆಚ್ಚಿನ ಪ್ರದೇಶಕ್ಕೆ ವಿಸ್ತರಣೆ

ಒಟ್ಟಾರೆ, 2022-23 ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು (ಲೆ.ಶೀ.2401-00-800-1-57 ಉ.ಶೀ.059) ಅನುದಾನ ಒದಗಿಸಲಾಗಿದ್ದು, ಪ್ರತಿ ರೈತ ಸಂಪರ್ಕ ಕೇಂದ್ರದ ಪ್ರತಿ ಸಭೆಗೆ ರೂ. 1750/- ವೆಚ್ಚ ಭರಿಸಲು ಪ್ರಸ್ತುತ ವರ್ಷದಲ್ಲಿ ಮಾಹೆವಾರು ಒಂದು ಸಭೆಯಂತೆ, 12 ಸಭೆಗಳನ್ನು ರೈತಸಂಪರ್ಕ ಕೇಂದ್ರದಲ್ಲಿ ನಡೆಸಲು ಹಾಗೂ ಮಾದರಿ ಗ್ರಾಮದಲ್ಲಿ ತ್ರೈಮಾಸಿಕಕ್ಕೆ ಒಂದರಂತೆ  4 ಸಭೆಗಳನ್ನು ಸೇರಿ 16 ಸಭೆಗಳನ್ನು ತಪ್ಪದೇ ಏರ್ಪಡಿಸಿ ಸಭೆಯ ನಡವಳಿಗಳನ್ನು ಕೇಂದ್ರ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ಹಾಗೆಯೇ ಪ್ರತೀ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಒಂದು ಮಾದರಿ ಗ್ರಾಮವನ್ನು ಆಯ್ಕೆಮಾಡಿ ವಿವಿಧ ಇಲಾಖೆಗಳ ಯೋಜನೆಗಳನ್ನು ಒಗ್ಗೂಡಿಸಿ ಗುಚ್ಛವಾಗಿ ಸಮಗ್ರ ಕೃಷಿ ಪದ್ದತಿಗಳನ್ನು ಅನುಷ್ಠಾನಗೊಳಿಸಿ ಫಲಾನುಭವಿಗಳ ವಿವರಗಳನ್ನು ಕೇಂದ್ರ ಕಛೇರಿಗೆ ಸಲ್ಲಿಸುವುದು.

 

 

 

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಲೆ.ಶೀ.: 2401-00-800-1-57

RKVY-RAFTAAR (Rashtriya Krishi Vikasa Yojana-Remunerative approaches for Agriculture and Allied sector Rejuvenation)

ಕೃಷಿ ಮತ್ತು ಕೃಷಿ ಸಂಬಂಧಿತ ವಲಯದಲ್ಲಿ ಬೆಳವಣಿಗೆಯನ್ನು ಸುಧಾರಿಸಲು ರಾಷ್ಟ್ರೀಯ ಅಭಿವೃದ್ಧಿ ಪರಿಷತ್ ದಿನಾಂಕ:29.05.2007ರಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಪ್ರಕಟಿಸಿರುತ್ತದೆ.  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2007-08 ರಿಂದ 2014-15 ರವರೆಗೆ ಶೇ.100 ರಷ್ಟು ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ವಿವಿಧ ಪ್ರಾಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗಿದೆ.

2007-08 ರಿಂದ 2014-15ರ ವರೆಗೆ ಶೇ. 100 ರಷ್ಟು ಸಹಾಯಧನ ಕೇಂದ್ರ ಸರ್ಕಾರದಿಂದ ನೀಡಲಾಗಿರುತ್ತದೆ.  ಆದರೆ, 2015-16ನೇ ಸಾಲಿನಿಂದ ಕೇಂದ್ರ ಸರ್ಕಾರವು 60:40 (ಕೇಂದ್ರದ ಪಾಲು : ರಾಜ್ಯದ ಪಾಲು) ಅನುಪಾತ ನಿಗಧಿಪಡಿಸಿರುತ್ತದೆ.

 

ಈ ಯೋಜನೆಯ ಮುಖ್ಯ ಉದ್ದೇಶಗಳು:

1. ರೈತರಿಗೆ ಕೊಯ್ಲು ಹಾಗೂ ಕೊಯ್ಲೋತ್ತರ ಚಟುವಟಿಕೆಗಳಿಗೆ, ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹಿಸುವುದು.
2. ರಾಜ್ಯಗಳಿಗೆ ಕೃಷಿ ಸಂಬಂಧಿತ ಯೋಜನೆಗಳಿಗೆ ಹೆಚ್ಚಿನ ಸ್ವಾತಂತ್ರತೆ ನೀಡುವುದು.
3. ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳಲ್ಲಿ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರಾಮುಖ್ಯತೆ  ನೀಡುವುದು.
4. ಸಮಗ್ರ ಕೃಷಿ ಪದ್ದತಿಗೆ ಉತ್ತೇಜನ ನೀಡುವುದು.
5. ವಿವಿಧ ಪ್ರಾಯೋಜನೆಗಳ ಮೂಲಕ ರಾಷ್ಟ್ರೀಯ ಆಧ್ಯತೆಗಳಿಗೆ ಪ್ರಾಮುಖ್ಯತೆ ಕೊಡುವುದು.
6. ಹೊಸ ತಂತ್ರಜ್ಞಾನ ಮತ್ತು ತಾಂತ್ರಿಕತೆ ಅಳವಡಿಕೆ ಹಾಗೂ ಕೃಷಿ ಉದ್ಯಮದಲ್ಲಿ      ತೊಡಗಿಸಿಕೊಳ್ಳಲು ಆಧ್ಯತೆ ನೀಡುವುದು.

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮಕ್ಕೆ ಕೃಷಿ ಇಲಾಖೆಯು ನೋಡಲ್ ಇಲಾಖೆಯಾಗಿದ್ದು, ಪ್ರಾಯೋಜನೆಗಳನ್ನು ರಾಜ್ಯಮಟ್ಟದ ಪ್ರಾಯೋಜನೆಗಳ ಪಾರಮಾರ್ಶಿಕ ಸಭೆ ಹಾಗೂ ಕೇಂದ್ರ ಸರ್ಕಾರದ ಪರಿಶೀಲನೆ ನಂತರ ರಾಜ್ಯಮಟ್ಟದ ಮಂಜೂರಾತಿ ಸಮಿತಿ ಸಭೆಯಲ್ಲಿ ಇಲಾಖೆ/ಸಂಸ್ಥೆಗಳಿಗೆ ಅನುಷ್ಠಾನಕ್ಕಾಗಿ ಅನುಮೋದನೆ ನೀಡಲಾಗುತ್ತದೆ.  2022-23ನೇ ಸಾಲಿಗೆ ಸಾಮಾನ್ಯ ಆರ್.ಕೆ.ವಿ.ವೈ ಯೋಜನೆಗೆ ರೂ.367.42 ಕೋಟಿ (ಕೇಂದ್ರ ಪಾಲು ರೂ.220.45 ಕೋಟಿ ಮತ್ತು ರಾಜ್ಯದ ಪಾಲು ರೂ.146.97 ಕೋಟಿ) ನಿಗಧಿಪಡಿಸಲಾಗಿರುತ್ತದೆ.  ಸದರಿ ಯೋಜನೆಯಡಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಸಹಕಾರ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು, ಕೃಷಿ ವಿಶ್ವ ವಿದ್ಯಾನಿಲಯ, ಧಾರವಾಡ, ಕೃಷಿ ವಿಶ್ವ ವಿದ್ಯಾನಿಲಯ, ರಾಯಚೂರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ,  ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು, ಗೇರು ಸಂಶೋಧನಾ ಸಂಸ್ಥೆ, ಪುತ್ತೂರು,  ಭಾರತೀಯ ಸಾಂಬಾರು ಪದಾರ್ಥಗಳ ಸಂಶೋಧನಾ ಸಂಸ್ಥೆ, ಕೊಡಗು, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ, ಬೆಂಗಳೂರು ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಮಂಗಳೂರು ಇತ್ಯಾದಿ ಕೃಷಿ ಸಂಬಂಧಿತ ಇಲಾಖೆ/ ಸಂಸ್ಥೆಗಳಿಗೆ ರಾಜ್ಯ ಮಂಜೂರಾತಿ ಸಮಿತಿ ಅನುಮೋದನೆಯನ್ವಯ ಅನುದಾನ ಒದಗಿಸಲಾಗುತ್ತದೆ.

 

 

 

 

 

  ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಮಗ್ರ ಕೃಷಿ ಪದ್ದತಿಯ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮದ ಅನುಷ್ಟಾನ ಮಾರ್ಗಸೂಚಿ

 

ಪೀಠಿಕೆ: ಸಮಗ್ರ ಕೃಷಿ ಪದ್ದತಿಯೆಂದರೆ ಎರಡು ಅಥವಾ ಹೆಚ್ಚಿನ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪರಸ್ಪರ ಅವಲಂಬನೆಯೊಂದಿಗೆ ಅಳವಡಿಸಿಕೊಳ್ಳುವುದು ಅಥವಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು. ರಾಜ್ಯದ ರೈತರು ಅನೇಕ ಶತಮಾನಗಳಿಂದ ವರ್ಷಪೂರ್ತಿ ಆದಾಯ ಮತ್ತು ಹೆಚ್ಚುವರಿ ಉದ್ಯೋಗಾವಕಾಶಗಳಂತಹ ಅನುಕೂಲಗಳಿಗಾಗಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸುತ್ತಿದ್ದಾರೆ. ಇದು ನೈಸರ್ಗಿಕ ತತ್ವವನ್ನು ಒಳಗೊಂಡಿರುವುದಲ್ಲದೆ, ಇದರ ಮೂಲಕ ಕೃಷಿ ಬೆಳೆಗಳ ಸಾಗುವಳಿ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳಾದ ಜಾನುವಾರು, ಕೋಳಿ, ಮೀನುಗಾರಿಕೆ, ರೇಷ್ಮೆ ಇವುಗಳನ್ನು ಒಗ್ಗೂಡಿಸಿ ಅಧಿಕ ಆದಾಯ ಪಡೆಯಬಹುದಾಗಿರುತ್ತದೆ. ಸಮಗ್ರ ಕೃಷಿ ಪದ್ದತಿಯಲ್ಲಿ ವಿಭಿನ್ನ ಚಟುವಟಿಕೆಗಳನ್ನು ಸಮತೋಲನದಲ್ಲಿ ಒಗ್ಗೂಡಿಸಿ ಪ್ರತಿಯೊಂದು ಘಟಕವು ಪೂರಕವಾಗಿ ಕೃಷಿ ಪದ್ದತಿಗಳನ್ನು ಅಳವಡಿಸಲು ಹಾಗೂ ಒಂದರ ತ್ಯಾಜ್ಯವನ್ನು ಇನ್ನೊಂದರ ಸಂಪನ್ಮೂಲವಾಗಿ ಮರುಬಳಕೆ ಮಾಡಲಾಗುತ್ತದೆ.

ಸಮಗ್ರ ಕೃಷಿ ಪದ್ದತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿವಿಧ ಘಟಕಗಳು ಉತ್ತಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು, ನೀರಿನ ಒಳಹರಿವಿನ ಗರಿಷ್ಠ ಬಳಕೆಗೆ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತವೆ. ಸಮಗ್ರ ಕೃಷಿ ಪದ್ದತಿ ಶ್ರಮದಾಯಕವಾಗಿದ್ದರೂ, ರೈತರ ಕುಟುಂಬಗಳು ವರ್ಷದುದ್ದಕ್ಕೂ ಆದಾಯ ಪಡೆಯುವಂತೆ ತೊಡಗಿಸಿಕೊಳ್ಳಲು ಸಹಾಯಕವಾಗುತ್ತವೆ. ಕ್ಲಸ್ಟರ್ ಮಾದರಿಗಳನ್ನು ಈ ಮೇಲೆ ಅನುಷ್ಟಾನ ಮಾಡುವುದರಿಂದ ಸಮಗ್ರ ಕೃಷಿ ಪದ್ದತಿಯಡಿ ಸಂಪನ್ಮೂಲಗಳನ್ನು ಮತ್ತು ಸಾಮೂಹಿಕ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತೇಜಿಸಬಹುದಾಗಿರುತ್ತದೆ. ದಇರಲ್ಲಿ  ಉತ್ಪಾದನಾ ವೆಚ್ಚ ಕಡಿಮೆಯಿದ್ದು, ಸುಸ್ಥಿರ ಆಧಾರದ ಮೇಲೆ ಆದಾಯವನ್ನು ಹೆಚ್ಚಿಸುತ್ತದೆ.

ಸಮಗ್ರ  ಕೃಷಿ ಪದ್ದತಿಯು ಏಕ ಬೆಳೆಪದ್ದತಿ ವಿಧಾನದಿಂದ ಬಹು ಬೆಳೆಪದ್ದತಿ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆ. ಕೃಷಿ ಪದ್ದತಿಗಳಲ್ಲಿ ಜಾನುವಾರು, ಬೆಳೆ ಉತ್ಪಾದನೆ, ತೋಟಗಾರಿಕೆ, ಇತರೆ  ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತದೆ.

ಸಮಗ್ರ ಕೃಷಿ ಪದ್ದತಿ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳು

ಗುರಿ:

2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ದತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ/ ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕೆ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಮುಖ್ಯ ಗುರಿಯಾಗಿರುತ್ತದೆ.

ಉದ್ದೇಶಗಳು

  1. ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು
    ಸಿದ್ದಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.
  2. ಉತ್ತಮ ಬೇಸಾಯ ಪದ್ದತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ
    ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು.
  3. ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು
    ಅಳವಡಿಸಲು ಪ್ರೇರೇಪಿಸುವುದು.

 

ಆರ್ಥಿಕ ವೆಚ್ಚ:

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ಸಮಗ್ರ ಕೃಷಿ ಮಾದರಿ ಸ್ಥಾಪಿಸಲು 2021-22 ಹಾಗೂ 2022-23 ನೇ ಸಾಲಿಗೆ ಒಟ್ಟಾರೆ 72.736 ಕೋಟಿ ರೂಗಳ ಅನುದಾನ ಅನುಮೋದನೆಯಾಗಿದ್ದು,  ಪ್ರತಿ ಪಂಚಾಯಿತಿಗೆ (10-15 ಗ್ರಾಮಗಳಿಗೆ) ಒಂದರಂತೆ ಮಳೆಯಾಶ್ರಿತ / ನೀರಾವರಿ ಮಾದರಿಗಳನ್ನು ಅಳವಡಿಸಲಾಗುವುದು. ಪ್ರಸ್ತುತ ವರ್ಷದಲ್ಲಿ ಶೇ.50 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು ಅನುಷ್ಠಾನಗೊಳಿಸಲು 36.37 ಕೋಟಿ ರೂ.ಗಳ ಕಾರ್ಯಕ್ರಮ ರೂಪಿಸಲಾಗಿದೆ.

ವಿಶೇಷ ಸೂಚನೆ:  2021-22 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿವಾರು  ಅನುಷ್ಟಾನಗೊಳಿಸಲು ಬಾಕಿ ಇರುವ ಸಮಗ್ರ ಕೃಷಿ  ಪದ್ದತಿಗಳನ್ನು  2022-23 ನೇ ಸಾಲಿಗೆ ಅಳವಡಿಸುವಂತೆ ಕಾರ್ಯಕ್ರಮ ರೂಪಿಸಿದ್ದು, ಅದರಂತೆ ಎಲ್ಲಾ ಜಿಲ್ಲೆಗಳು ಅನುಷ್ಟಾನಗೊಳಿಸಲು ಕ್ರಮ ವಹಿಸುವುದು

ಯೋಜನೆಯ ವಿವರ ಹಾಗೂ ಘಟಕವಾರು ವಿವರಗಳೊಂದಿಗೆ ಅನುಷ್ಟಾನ ಮಾರ್ಗಸೂಚಿ:

ಕರ್ನಾಟಕ ರಾಜ್ಯದಲ್ಲಿ 6027 ಗ್ರಾಮಪಂಚಾಯಿತಿಗಳಿದ್ದು, ಇದರಲ್ಲಿ ಮಳೆ ಪ್ರಮಾಣದ ಆಧಾರದಲ್ಲಿ 4100 ಗ್ರಾಮ ಪಂಚಾಯಿತಿಗಳನ್ನು ಮಳೆಯಾಶ್ರಿತ ಪ್ರದೇಶಗಳಿಗಾಗಿ ಹಾಗೂ 1927  ಗ್ರಾಮ ಪಂಚಾಯಿತಿಗಳನ್ನು ನೀರಾವರಿ ಮಾದರಿಗಳಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯಡಿ ಎರಡು ವರ್ಷಗಳಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ  ಸಮಗ್ರ  ಕೃಷಿ ಪದ್ದತಿಯ ಮಾದರಿ ಸ್ಥಾಪಿಸಲು ಯೋಜಿಸಿದೆ. ಪ್ರಸಕ್ತ ವರ್ಷದಲ್ಲಿ  ಮಳೆಯಾಶ್ರಿತ ಪ್ರದೇಶಗಳ 2050  ಗ್ರಾಮ ಪಂಚಾಯಿತಿಗಳನ್ನು ಹಾಗೂ ನೀರಾವರಿ ಪ್ರದೇಶದ 963 ಗ್ರಾಮ ಪಂಚಾಯಿತಿಗಳು ಸೇರಿ 3013 ಸಮಗ್ರ  ಕೃಷಿ ಪದ್ದತಿಯ ಮಾದರಿ ಹಾಗೂ ಇತರೆ ರೈತರಿಗೆ ಕಲಿಕಾ ಕ್ಷೇತ್ರವಾಗಿ ಸ್ಥಾಪಿಸಲು ಯೋಜಿಸಲಾಗಿದೆ. ಇದರಲ್ಲಿ ವಿವಿಧ ಜಿಲ್ಲೆಗಳಿಂದ 2021-22 ನೇ ಸಾಲಿನ 1417 ಮಾದರಿಗಳನ್ನು ಅನುಷ್ಟಾನಗೊಳಿಸಲು ಬಾಕಿ ಸೇರಿ  ಒಟ್ಟು  4420 ಸಂಖ್ಯೆಗಳನ್ನು 2022-23 ನೇ ಸಾಲಿನಲ್ಲಿ ಅನುಷ್ಟಾನಗೊಳಿಸಲು ಕ್ರಮವಹಿಸಲು ಸೂಚಿಸಿದೆ.

ಕಾರ್ಯಕ್ರಮದ ಕಾರ್ಯಕ್ಷೇತ್ರ  :  (Area of Operation)

ಯೋಜನೆ ಅನುಷ್ಠಾನಗೊಳಿಸಬೇಕಾದ ಜಿಲ್ಲೆಗಳು
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಎಲ್ಲಾ ಜಿಲ್ಲೆಗಳು

 

Visit official website for more details